ಗೋಣಿಸೊಪ್ಪು
 
ಪೋರ್ಟುಲಕೇಸೀ ಕುಟುಂಬಕ್ಕೆ ಸೇರಿದ ಒಂದು ಕಳೆ ಸಸ್ಯ. ಪೋರ್ಟುಲಕ ಕ್ವಾಡ್ರಿ ಫಿಡ ಇದರ ವೈಜ್ಞಾನಿಕ ಹೆಸರು. ಭಾರತದಲ್ಲೆಲ್ಲ ಇದರ ವ್ಯಾಪ್ತಿಯಿದೆ. ಇದು ನೆಲದ ಮೇಲೆ ಹರಡಿಕೊಂಡು ಬೆಳೆಯುವ ಏಕವಾರ್ಷಿಕ ಮೂಲಿಕೆ ಗಿಡ. ಕಾಂಡ ಮತ್ತು ಎಲೆಗಳು ದಪ್ಪವಾಗಿ ರಸಭರಿತವಾಗಿ ಇವೆ. ಎಲೆಗಳ ಆಕಾರ ದೀರ್ಘ ಅಂಡದಂತೆ. ಉದ್ದ 3 - 6 ಮಿ.ಮೀ. ಎಲೆಗಳಲ್ಲಿ ಒಂದು ಬಗೆಯ ಲೋಳೆಯೂ ಪೊಟ್ಯಾಸಿಯಮ್ ಆಕ್ಸಲೇಟೂ ಇವೆ. ಇದರಿಂದಾಗಿ ಅವಕ್ಕೆ ಹುಳಿ ರುಚಿಯಿದೆ. ಹೂಗಳು ಹಳದಿ. ಒಂಟೊಂಟಿಯಾಗಿ ಕವಲುಗಳ ತುದಿಯಲ್ಲಿ ಹುಟ್ಟುತ್ತವೆ. ಕಾಯಿ ಸಂಪುಟ ಮಾದರಿಯದು.

	 ಗೋಣಿಸೊಪ್ಪು ಬಲು ಉಪದ್ರವಕಾರಿ ಕಳೆಗಿಡ. ಎಲ್ಲ ಕಳೆಸಸ್ಯಗಳಂತೆ ಇದರ ಪುನರುತ್ಪಾದನ ಸಾಮಥ್ರ್ಯವೂ ಬಹಳ ಹೆಚ್ಚು. ಗಿಡವನ್ನು ಕತ್ತರಿಸಿ ಹಾಕಿದರೂ ಅದರ ಸಣ್ಣ ತುಂಡುಗಳು ಬಲು ಬೇಗ ಬೇರೊಡೆದು ಹೊಸ ಗಿಡಗಳಾಗುತ್ತವೆ. ಬೀಜಗಳೂ ಬಹಳ ಬೇಗ ಮೊಳೆಯುತ್ತವೆ. ಇದರಿಂದಾಗಿ ಈ ಸಸ್ಯ ಯಾವ ಪ್ರದೇಶವನ್ನೇ ಆಗಲಿ ಬಹಳ ಬೇಗ ಆಕ್ರಮಿಸಿಕೊಂಡುಬಿಡುತ್ತದೆ. ಗಿಡವನ್ನು ಬೇರು ಸಮೇತ ಕಿತ್ತು ಸುಟ್ಟು ಬಿಡುವುದೇ ಇದರ ನಿಯಂತ್ರಣದ ಉತ್ತಮ ಮಾರ್ಗ.

	ಗೋಣಿಸೊಪ್ಪು ಕೆಲವೆಡೆ ಸೊಪ್ಪು ತರಕಾರಿಯಾಗಿ ಬಳಸುವುದಿದೆ. ಆದರೆ ಇವು ದೊಡ್ಡ ಗೋಣಿಸೊಪ್ಪಿನಷ್ಟು (ನೋಡಿ- ದೊಡ್ಡಗೋಣೀಸೊಪ್ಪು) ಒಳ್ಳೆಯದಲ್ಲ. ಹೆಚ್ಚು ತಿಂದರೆ ಜಡತೆ ಉಂಟಾಗುತ್ತದೆ. ಆದರಿದಕ್ಕೆ ಔಷಧಿಯ ಗುಣಗಳುಂಟು. ಅಸ್ತಮ, ಕೆಮ್ಮು, ಮೂತ್ರಸಂಬಂಧಿ ರೋಗ, ಬಾವು, ವ್ರಣಗಳು ಮುಂತಾದವುಗಳಿಗೆ ಇದನ್ನು ಬಳಸುವುದಿದೆ. ಮೊಳೆರೋಗ, ವಿಸರ್ಪಿ (ಎರಿಸಿಪೆಲಾಸ್) ಮತ್ತು ಉದರದ ಹಲವು ಬೇನೆಗಳಿಗೆ ಸೊಪ್ಪಿನ ಬೆಚ್ಚಾರ ಹಾಕುತ್ತಾರೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ